ಪೆರಿಯಾರ್ ಯೋಜನೆ -
ತಮಿಳುನಾಡಿನ ಮಧುರೆ ಜಿಲ್ಲೆಯಲ್ಲಿ ಪೆರಿಯಾರ್ ನದಿಗೆ ಅಡ್ಡ ಕಟ್ಟಿರುವ ಎತ್ತರವಾದ ಕಟ್ಟೆ ಮತ್ತು ಇದರ ಘಟಕಗಳು. ಕಟ್ಟೆ ಕೆಲಸ 1887ರಲ್ಲಿ ಆರಂಭವಾಗಿ, ನೀರಾವರಿ 1895ರಲ್ಲಿ ತೊಡಗಿತು. ಕಟ್ಟೆ ಇರುವ ಸ್ಥಳಕ್ಕೆ ಮಧುರೆಯಿಂದ ಸುಮಾರು 135 ಕಿ.ಮೀ. ದೂರದ ತೆಕ್ಕೋಡಿಯ ಮಾರ್ಗವಾಗಿ ಹೋಗಬೇಕು. ಈ ಗುಡ್ಡಗಾಡಿನ ಪ್ರದೇಶದಲ್ಲಿ ವರ್ಷಕ್ಕೆ ಸರಾಸರಿ. 225 ಸೆಂ.ಮೀ. ಮಳೆ ಬೀಳುತ್ತದೆ. ಮಾನವಾರೋಗ್ಯಕ್ಕೆ ಮಾರಕವಾಗಿದ್ದ ಈ ನೆಲೆಯಲ್ಲಿ ಕಟ್ಟೆ ಕಟ್ಟುವುದು ಬಲು ಪ್ರಯಾಸಕರವಾಯಿತು. ಕಟ್ಟೆಯ ತಳಪಾಯದಲ್ಲಿ ಗಟ್ಟಿ ಕಲ್ಲಿನ ಬಂಡೆ ಸಿಕ್ಕಿದೆ. ಕಟ್ಟೆಯ ಎತ್ತರ ನದಿಯ ಮೇಲೆ 48 ಮೀ. ತಳಪಾಯ ಕೆಳಗಡೆ 5.5 ಮೀ. ಆಳವಾಗಿ ಹೋಗಿದೆ. ತಳಪಾಯದ ಅಗಲ 4 ಮೀ. ಕಟ್ಟೆಯ ಮೇಲಿನ ಅಗಲ 3.66 ಮೀ. 110 ಮೀ. ಉದ್ದದ ಕೋಡಿಯೂ ಸೇರಿ ಕಟ್ಟೆಯ ಉದ್ದ 378 ಮೀ. ಸರೋವರದ ಜಲಾನಯನ ಭೂಮಿ 600 ಚ.ಕಿ.ಮೀ. ಕಟ್ಟೆಯ ಬಳಿ ನದಿಯ ಮಹಾಪ್ರವಾಹ ಸೆಕೆಂಡಿಗೆ 5,184 ಘನ ಸೆಂ.ಮೀ. ಸರೋವರದಲ್ಲಿ 28 ಚ.ಕಿ.ಮೀ. ಭೂಮಿ ಮುಳಗಡೆಯಾಗಿದೆ. ಅದರಲ್ಲಿ 44,400 ಹೆಕ್ಟೇರ್-ಮೀಟರ್ ನೀರು ಹಿಡಿಯುತ್ತದೆ.

	ಈ ಕಟ್ಟೆಯಿಂದಾಗಿ ಪೆರಿಯಾರ್ ನದಿ ಮುಂದಕ್ಕೆ ತನ್ನ ಪಾತ್ರದಲ್ಲಿ ಹರಿಯುವುದನ್ನೇ ನಿಲ್ಲಿಸುತ್ತದೆ. ಜಲಾಶಯದ ನೀರನ್ನು ಆ ಗುಡ್ಡಗಾಡಿನ ಪ್ರದೇಶದಲ್ಲಿ ನೀರಾವರಿಗಾಗಿ ಉಪಯೋಗಿಸುವುದು ಸಾಧ್ಯವಿಲ್ಲ. ಅದಕ್ಕಾಗಿ ತೂಬಿನಿಂದ ನೀರನ್ನು ಪರ್ಯಾಯ ದ್ವೀಪದ ನೀರನೆತ್ತಿಯ ಮೂಲಕ ಒಂದು ಸುರಂಗದಲ್ಲಿ ಪೂರ್ವಸಮುದ್ರದ ಕಡೆಗೆ ಹರಿಯುವ ವೈಗೈ ನದಿಗೆ ಬಿಟ್ಟು ಅಲ್ಲಿಂದ ನಾಲೆಗಳನ್ನು ತೆಗೆದುಕೊಂಡು ಹೋಗಿ ಮಳೆ ಕಡಿಮೆಯಾದ ವಿಶಾಲವಾದ ಪ್ರದೇಶಗಳಿಗೆ ನೀರಾವರಿಯನ್ನು ಒದಗಿಸಿದ್ದಾರೆ. ಈ ಯೋಜನೆಯಿಂದ ಒಟ್ಟು 80,900 ಹೆಕ್ಟೇರಿಗೆ ನೀರು ದೊರಕುತ್ತದೆ.
(ಎಚ್.ಸಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ